ತೋರೈಟ್ -
ತೋರಿಯಮ್ ಖನಿಜಗಳ ಪೈಕಿ ಪ್ರಮುಖವಾದದ್ದು. ರಾಸಾಯನಿಕವಾಗಿ ತೋರಿಯಮ್ ಸಿಲಿಕೇಟ್ ಸಂಯೋಜನೆಯನ್ನು ಪಡೆದಿದೆ. ಈ ಖನಿಜದ ತಾತ್ತ್ವಿಕ ಸೂತ್ರ ThSiO4. ಇದರಲ್ಲಿ 81.5% ಭಾಗ ತೋರಿಯಮ್ ಧಾತು ಇರಬಹುದಾದರೂ ವಿಶ್ಲೇಷಣೆಗಳ ಪ್ರಕಾರ ತೋರಿಯಮ್ ಪ್ರಮಾಣ 50%-70% ಭಾಗ ಎಂದು ತಿಳುದುಬಂದಿದೆ. ಯುರೇನಿಯಮ್ ಹಾಗೂ ಸೀರಿಯಮ್ ಇತರ ಮುಖ್ಯ ಧಾತುಗಳು. ಅನೇಕ ವೇಳೆ ಈ ಖನಿಜ ಜಲೀಯ ಕ್ರಿಯೆಯಿಂದ ಪರಿವರ್ತನೆಗೊಂಡು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ ಸಮದೈಶಿಕ (ಐಸೊಟ್ರಾಪಿಕ್) ಗುಣವನ್ನೂ ಅಸ್ಫಟಿಕ ರೂಪವನ್ನು ಪ್ರದರ್ಶಿಸುವುದು. ಹೆಚ್ಚು ಪ್ರಮಾಣದ ಪರಿವರ್ತನೆ ಹಾಗೂ ರಾಸಾಯನಿಕ ಸಂಯೋಜನೆಯ ವ್ಯತ್ಯಾಸದಿಂದಾಗಿ ಖನಿಜದ ಸಾಪೇಕ್ಷಸಾಂದ್ರತೆ 4.4-5.4 ರ ವರೆಗೆ ವ್ಯತ್ಯಾಸ ತೆಳೆಯುತ್ತದೆ. ಚತುಷ್ಟಲಕೀಯ (ಟೆಟ್ರಾಗೊನಲ್) ವ್ಯವಸ್ಥೆಯ ತೋರೈಟ್ ಸ್ಫಟಿಕ ರೂಪದಲ್ಲಿ ಕಂಡುಬರುವುದು ವಿರಳ. ಗೋಪುರ ಅಥವಾ ಚಚ್ಚೌಕ ಪ್ರಿಸಮ್ ರೂಪದಲ್ಲಿ ಕೆಲವು ವೇಳೆ ಕಂಡುಬರುತ್ತದೆ. ಬಹುತೇಕ ಅನಿಯಾತಾಕೃತಿ ಕಣವಾಗಿ ದೊರೆಯುವುದೇ ವಾಡಿಕೆ. ಇದರ ಬಣ್ಣ ತಿಳಿಕಂದು. ರತ್ನ ಖನಿಜ ವರ್ಗಕ್ಕೆ ಸೇರಿದ ತೋರೈಟಿನ ಒಂದು ಬಗೆಯಾದ ಓರಂಗೈಟ್ ಕಿತ್ತಲೆ ಹಳಿ ಬಣ್ಣದಿಂದ ಕೂಡಿದೆ. ಇದರಲ್ಲಿ ಸೀಳುಗಳು ಕಂಡುಬಂದಿಲ್ಲ. ಇದು ಶಂಖಾಕೃತಿಯಲ್ಲಿ ಬಿರಿಯುತ್ತದೆ. ಇದರ ಓರೆಯ ಬಣ್ಣ ತಿಳಿಕಿತ್ತಲೆಯಿಂದ ಕಂದಿನ ವರೆಗೆ ಉಂಟು. ಅಂಟಿನ ಹೊಳಪುಳ್ಳ ತೋರೈಟನ್ನು ಅದರ ಬಣ್ಣ ಹೊಳಪು ರೂಪ ಹಾಗೂ ಉತ್ಕøಷ್ಟ ರೇಡಿಯೊ ವಿಕಿರಣ ಪಟುತ್ವ ಗುಣಗಳಿಂದ ಗುರುತಿಸಬಹುದು. ಶುದ್ದ ಸ್ಫಟಿಕ ರೂಪದ ತೋರೈಟಿನ ಸಾಂದ್ರತೆ 6-7. ತೋರೈಟ್ ಖನಿಜದ ತೋರಿಯಮ್ ಧಾತುವನ್ನು ಕೆಲವೊಮ್ಮೆ ಯುರೇನಿಯಮ್ ಸ್ಥಾಳಾಂತರಿಸುತ್ತದೆ. ಇಂಥ ತೋರೈಟ್‍ನ್ನು ಯುರೇನೋ ತೋರೈಟ್ ಎನ್ನುವರು. (Siಔ4)-4ನ್ನು (ಔಊ4)-4 ಸ್ಥಳಾಂತರಿಸಿದಾಗ ಉಂಟಾಗುವ ತೋರೈಟ್ ಖನಿಜಕ್ಕೆ ತೋರೋಗುಮ್ಮೈಟ್ ಎಂದು ಹೆಸರು. ಇದಕ್ಕೆ ಉತ್ಕøಷ್ಟ ರೇಡಿಯೊ ವಿಕಿರಣ ಪಟುತ್ವ ಉಂಟು.

ಅಗ್ನಿಶಿಲೆಗಳಾದ ಗ್ರಾನೈಟ್, ಸಂಯೆನೈಟ್ ಹಾಗೂ ನೆಪಿಲೀನ್ ಸಯನೈಟ್‍ಗಳಲ್ಲಿಯೂ ಇವುಗಳೊಂದಿಗೆ ಸಂಘಟಿತವಾದ ಪೆಗ್‍ಮಟೈಟ್ ಶಿಲೆಗಳಲ್ಲಿಯೂ ತೋರೈಟ್ ಖನಿಜ ದೊರೆಯುತ್ತದೆ. ತೇಮಾನಗೊಂಡ ಮರಳಿನಲ್ಲೂ ಇದು ಸಿಕ್ಕುವುದುಂಟು. ಆಗೈಟ್ ಸಯೆನೈಟ್ ಶಿಲೆಯಲ್ಲಿ ತೋರೈಟ್ ಪ್ರತ್ಯೇಕವಾಗಿಯೂ ಗುಂಪಾಗಿಯೂ ಇರುವುದು.
(ಟಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ